Skip to content

ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸ ಟ್ರಸ್ಟ್ (ರಿ.)

ಹುಳಿಯಾರ್ ರಸ್ತೆ, ಬಾಣಾವರ - 573112, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ.
(ಸಖರಾಯಪಟ್ಟಣದ ಗುರುನಾಥರು ಹೇಳಿ ಬರೆಯಿಸಿದ್ದು)

ಇತಿಹಾಸ

ಇಂದಿಗೆ* (2009 ಇಸವಿ) ಸರಿ ಸುಮಾರು 454 ವರ್ಷಗಳ ಹಿಂದೆ ಸಾತ್ವಿಕ ಕುಟುಂಬದಲ್ಲಿ ಜನಿಸಿದ ಅವತಾರ ಪುರುಷರಾದ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸ ಎಂಬ ಯೋಗಿಗಳು ತಮ್ಮ 12ನೇ ವಯಸ್ಸಿನಲ್ಲಿಯೇ ಗಾಯತ್ರೀ ಪುರಶ್ಚರಣೆ ಹಾಗೂ ಸೂರ್ಯ ನಮಸ್ಕಾರ, ಸೂರ್ಯೋಪಾಸನೆ ಮಾಡಿ ಯೋಗದಲ್ಲಿ ನಿಷ್ಣಾತರಾಗಿಯೂ ಮತ್ತು 27 ವಯಸ್ಸಿನ ತನಕ ತಪಸ್ಸನ್ನಾಚರಿಸಿ 28ನೇ ವಯಸ್ಸಿನಿಂದ 48 ವಯಸ್ಸಿನ ತನಕ ಅಖಂಡ ಭಾರತದಾದ್ಯಂತ ಸಂಚರಿಸಿ ಕರ್ನಾಟಕ ರಾಜ್ಯದ ಈಗಿನ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವೃದ್ಧರಾದ ತಂದೆ ತಾಯಿಗಳೊಡನೆ ಲೌಕಿಕವಾಗಿ ವಾಸವಾಗಿದ್ದರು. ಮುಂದೆ ಸನ್ಯಾಸವನ್ನು ಸ್ವೀಕಾರ ಮಾಡಿ ಬಾಣಾವರದಲ್ಲಿ ವಾಸ್ತವ್ಯ ಹೂಡಿ ಅಲ್ಲಿ ನೆಲೆ ನಿಂತು ತಮ್ಮ ಅಲೌಕಿಕ ಸಾಧನೆಯ ಜಗತ್ತಿನ ಅನುಭವಗಳನ್ನು ಈ ನಾಡಿನಾದ್ಯಂತ ಬೆಳಗಿದರು. ಅನೇಕ ಶಿಷ್ಯ ಕೋಟಿಗಳನ್ನು ಹಾಗೂ ಭಕ್ತರನ್ನು ಹೊಂದಿದ್ದರು.
ವೃದ್ಧರಾದಂತಹ ಅವರ ತಾಯಿಯ ಬಹುದಿನಗಳ ಅಪೇಕ್ಷೆಯ ಮೇರೆಗೆ ಅವರ ತಾಯಿಗೆ ತಮ್ಮ ಲೀಲೆಯ ಮೂಲಕ ದಿವ್ಯ ದೃಷ್ಟಿಯನ್ನು ಅನುಗ್ರಹಿಸಿ ಕಾಶಿ ವಿಶ್ವನಾಥನ ದರ್ಶನ ಮಾಡಿಸಿ ಮನೆಯಲ್ಲಿ ಇದ್ದಂತಹ ಗಂಗಾತಾಲಿಯಿಂದಲೂ ಗಂಗೆಯನ್ನು ಆಹ್ವಾನಿಸಿ ತಮ್ಮ ಲೀಲೆಯಿಂದ ಗೋಡೆಯಲ್ಲಿ ಗಂಗೆಯನ್ನು ಹರಿಸಿ ತಮ್ಮ ತಾಯಿಯು ಗಂಗಾಸ್ನಾನವನ್ನು ಮಾಡುವಂತೆ ಮಾಡಿ ಹಾಗೂ ಇದ್ದಂತಹ ಸ್ಥಳದಲ್ಲಿಯೇ ಕಾಶಿ ವಿಶ್ವನಾಥನ ದರ್ಶನವನ್ನು ಮಾಡಿಸಿ ತಾಯಿಯವರಿಗೆ ಮೋಕ್ಷ ಪದವಿಯನ್ನು ಅನುಗ್ರಹಿಸಿದರು.
ಗುರುಗಳು ಶ್ರೀಕೃಷ್ಣನ ಔಪಾಸಕರಾಗಿದ್ದು ಸ್ವತಃ ತಮ್ಮ ಇಷ್ಟ ದೇವರಾದ ಮಾಲೇಕಲ್ಲು ತಿರುಪತಿಯ ವೇಂಕಟೇಶ್ವರನ ಸನ್ನಿಧಿಯಲ್ಲಿ ಅದೃಶ್ಯ ರೂಪದಲ್ಲಿ ಬೆಟ್ಟದ ಮೇಲಿನ ವೇಂಕಟೇಶನ ಸನ್ನಿಧಿಯಲ್ಲಿ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ವೇಂಕಟೇಶನ ಸನ್ನಿಧಿಯಲ್ಲಿ ಏಕಕಾಲದಲ್ಲಿ ಪ್ರತಿನಿತ್ಯ ಆಶ್ಚರ್ಯಕರ ರೀತಿಯಿಂದ ಪೂಜೆಗೈಯ್ಯುತ್ತಿದ್ದರು. ಆಂದಿನ ದಿನಗಳಲ್ಲಿ ಬೆಟ್ಟಕ್ಕೇರುವ ವ್ಯವಸ್ಥೆ ಇಲ್ಲದೇ ಇರುವ ಕಾರಣದಿಂದ ಹಾಗೂ ಭಕ್ತವರ್ಗದ ಪ್ರಾರ್ಥನೆಯಿಂದ ಬೆಟ್ಟಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವ ಸದುದ್ದೇಶದಿಂದ ಒಂದು ತುಳಸಿ ಮಾಲೆಯನ್ನು ಅಭಿಮಂತ್ರಿಸಿ, ತುಳಸಿ ಮಾಲೆಯ ರೀತಿಯಲ್ಲಿ ಮೆಟ್ಟಿಲುಗಳು ಮೂಡಲಿ ಎಂದು ಅನುಗ್ರಹಿಸಿದರು. ಈ ಎಲ್ಲಾ ಕಾರಣಗಳಿಂದ ಇಂದಿಗೂ ಅರಸೀಕೆರೆ ಮಾಲೇಕಲ್ಲು ತಿರುಪತಿಯ ಶ್ರೀ ವೇಂಕಟೇಶ್ವರ ರಥೋತ್ಸವದ ಸಮಯದಲ್ಲಿ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರರ ಹೆಸರಿನಲ್ಲಿ ಅಗ್ರಪೂಜೆಯು ನೆರವೇರುತ್ತದೆ. ಈ ಮಾಹಿತಿಯನ್ನು ಇಂದಿಗೂ ಸಹ ಮಾಲೇಕಲ್ಲು ತಿರುಪತಿಯ ಅರ್ಚಕರ ಮೂಲಕ ತಿಳಿದುಕೊಳ್ಳಬಹುದು.
ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರರು ಇಂದಿಗೆ* ಸುಮಾರು 454 ವರ್ಷಗಳ ಹಿಂದೆ ಈಗಿನ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಜ್ಯೇಷ್ಠ ಬಹುಳ ಬಿದಿಗೆಯ ದಿನ ಅವತರಿಸಿದರು. ಯಳ್ಳಂಬಳಸೇ ಗ್ರಾಮ, ಅವತಾರ ಪುರುಷರ ಸ್ಥಳದ ಕೇಂದ್ರ ಬಿಂದುವಾಗಿ ಮುಂದುವರೆದಿದೆ. ಉದಾಹರಣೆಯಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಪರಮಹಂಸರು. ಇವರ ಪೂರ್ವಾಶ್ರಮದ ನಾಮಧೇಯ ಯಳ್ಳಂಬಳಸೆಯ ಸುಬ್ರಹ್ಮಣ್ಯ ಶರ್ಮರು. ಇವರ ಜನನ ಕಾಲ ದಿನಾಂಕ 05-01-1880. ಇವರು ಹೊಳೇನರಸೀಪುರದಲ್ಲಿ ಶಾಂಕರ ವೇದಾಂತಕ್ಕೆ 20ನೇ ಶತಮಾನದ ಅಧಿಕೃತ ವಕ್ತಾರರಾಗಿದ್ದರು. ಪೂಜ್ಯರು 1975ನೇ ಆಗಸ್ಟ್ 5 ರಂದು ಬ್ರಹ್ಮೀಭೂತರಾದರು. ಇವರ ಮಹಾಸಮಾಧಿಯ ಮಹಾಸಮಾಧಿಯ ನಂತರವೂ ಚೈತನ್ಯ ಸ್ವರೂಪಿಗಳಾಗಿ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಮೂಲಶಕ್ತಿಯಾಗಿದ್ದಾರೆ. ತದನಂತರ ಯಳ್ಳಂಬಳಸೇ ಗ್ರಾಮವು ಕೊಡುಗೆಯಾಗಿ ಶ್ರೀ ಶ್ರೀ ಶ್ರೀ ಜ್ಞಾನಾನಂದೇಂದ್ರ ಸರಸ್ವತೀ ಪರಮಹಂಸರನ್ನು ಕೊಡುಗೆಯಾಗಿ ನೀಡಿದೆ. ಇವರ ಸಮಾಧಿ ಸ್ಥಳವು ಈಗಿನ ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮುದ್ರ ತೀರದ ಸಾಗರ ನಗರ ಎಂಬಲ್ಲಿ ಇರುತ್ತದೆ.

ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರರ ಪಾದುಕೆ ಹಾಗೂ ಪೂಜ್ಯರು ಪೂಜೆಗೈಯ್ಯುತ್ತಿದ್ದ ಶ್ರೀ ಕೃಷ್ಣನ ವಿಗ್ರಹಗಳಿಗೆ ಶ್ರೀ ಗುರುಗಳ ವಂಶಜರ ಮನೆಗಳಲ್ಲಿ ಈಗಲೂ ಪೂಜಾದಿಗಳು ನಡೆಯುತ್ತಿವೆ.

ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರರು ಪಾದುಕಾ ಸಿದ್ಧಿಯನ್ನು ಹೊಂದಿದ್ದರು. ಏಕಕಾಲದಲ್ಲಿ ತಮ್ಮ ಭಕ್ತಾದಿಗಳಿಗೆ ಎರಡು ಮತ್ತು ಮೂರು ಕಡೆಗಳಲ್ಲಿ ದರ್ಶನ ಕೊಡುತ್ತಿದ್ದರು. ಇಂದಿಗೂ ಶ್ರೀಗಳ ವಂಶಜರಲ್ಲಿ ಹಾಗೂ ಭಕ್ತಾದಿಗಳಲ್ಲಿ ಈ ನಂಬಿಕೆ ಮತ್ತು ಪ್ರತೀತಿ ಇದೆ. ಇವರ ಶಿಷ್ಯರ ಎರಡು ಸಮಾಧಿಗಳು ಬಾಣಾವರದಲ್ಲಿ ಇರುತ್ತದೆ ಹಾಗೂ ಶ್ರೀಗಳ ಪ್ರಮುಖ ಶಿಷ್ಯರ ಜೀವಂತ ಸಮಾಧಿಯು ಸಹ ಇರುತ್ತದೆ.

ಶ್ರೀ ಶ್ರೀ ಶ್ರೀ ಕೃಷ್ಣಯೋಗಿಂದ್ರರು ತಮ್ಮ 62ನೇ ವಯಸ್ಸಿನಲ್ಲಿ ಬಾಣಾವರದ ಹುಳಿಯಾರು ರಸ್ತೆಯ ಹೊಸಕೆರೆಯ ಏರಿಯ ಪಕ್ಕದಲ್ಲಿ ಜೀವಂತವಾಗಿ ಬೃಂದಾವನ ಪ್ರವೇಶವನ್ನು ಮಾಡಿದರು. ಮಹಾಸಮಾಧಿಯು ಕಾರ್ತಿಕ ಮಾಸದ ಉತ್ಥಾನದ್ವಾದಶಿಯ ದಿನದಂದು ನೆರವೇರಿದೆ. ಇಂದಿಗೂ ಕೂಡ ಪ್ರತೀ ವರ್ಷ ಈ ಪವಿತ್ರವಾದ ದಿನದಂದು ಶ್ರೀಗಳ ಭಕ್ತಾದಿಗಳಿಂದ ಜಾತಿ, ಮತ, ಧರ್ಮ, ಭೇದವಿಲ್ಲದೆ ಶ್ರೀ ಗುರುಗಳ ಆರಾಧನಾ ಮಹೋತ್ಸವವು ಬಹಳ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.